ದರ್ಭಾಂಗಾ -
	ಭಾರತ ಗಣರಾಜ್ಯದಲ್ಲಿರುವ ಬಿಹಾರ ರಾಜ್ಯದ ಉತ್ತರ ಗಡಿಯ ಒಂದು ಜಿಲ್ಲೆ ; ಆ ಜಿಲ್ಲೆಯ ಒಂದು ನಗರ.  ಉತ್ತರದಲ್ಲಿ ನೇಪಾಳ, ಪಶ್ಚಿಮದಲ್ಲಿ ಮುಜûಫರ್ ಪುರ ಜಿಲ್ಲೆ, ದಕ್ಷಿಣದಲ್ಲಿ ಪಟನಾ ಜಿಲ್ಲೆ, ಪೂರ್ವದಲ್ಲಿ ಸಹರ್ಸಾ ಜಿಲ್ಲೆ, ಆಗ್ನೇಯದಲ್ಲಿ ಮಾಂಘೀರ್ ಜಿಲ್ಲೆ-ಇವು ಈ ಜಿಲ್ಲೆಯ ಮೇರೆಗಳು.  ಉ.ಅ. 250, 290 -260, 40' ಮತ್ತು ಪೂ.ರೇ. 85 0 34'- 860, 46' ನಡುವೆ ಇರುವ ಈ ಜಿಲ್ಲೆಯ ವಿಸ್ತೀರ್ಣ 8,679 ಚ.ಮೀ.  ಜನಸಂಖ್ಯೆ 52,33,904 (1971).  ಈ ಜಿಲ್ಲೆಯನ್ನು ಮೆಕ್ಕಲು ಮಣ್ಣಿನ ಮೈದಾನ ಆವರಿಸಿದೆ.  ತಗ್ಗಾದ ನೆಲ ಜವುಗಿನಿಂದ ಕೂಡಿದ್ದು ; ಅಲ್ಲಲ್ಲಿ ಸರೋವರಗಳಿವೆ.  ಗಂಗಾ, ಬುರಿ ಗಂಡಕ್ ಮತ್ತು ಭಾಗಮತಿ ಈ ಜಿಲ್ಲೆಯ ಮುಖ್ಯನದಿಗಳು.  ಬತ್ತ, ಕಬ್ಬು, ಗೋವಿನಜೋಳ, ಸಜ್ಜೆ, ಗೋಧಿ, ಎಳ್ಳು, ಹತ್ತಿ, ಹೊಗೆಸೊಪ್ಪು ಸೆಣಬು ಮತ್ತು ಮಾವು ಮುಖ್ಯ ಬೆಳೆಗಳು.  ಪೂಸಾದಲ್ಲಿ ಕೃಷಿ ಸಂಶೋಧನಾ ಕೇಂದ್ರವಿದೆ.  ಸಮಷ್ಟಿಪುರ ಒಂದು ವಾಣಿಜ್ಯಕೇಂದ್ರ.  ದರ್ಭಾಂಗ ಮತ್ತು ಸಮಷ್ಟಿಪುರ ಎರಡು ರೈಲ್ವೆ ಸಂಧಿಸ್ಥಳಗಳು.  ಜಿಲ್ಲೆಯಲ್ಲಿರುವ ಪ್ರಮುಖ ಪಟ್ಟಣಗಳು ಇವು :  ದರ್ಭಾಂಗ (1,32,059), ಮಧುಬನಿ (32,919), ಸಮಷ್ಟಿಪುರ (31,566).

    
ದರ್ಭಾಂಗಾ ನಗರ ಉ.ಅ. 260, 10' ಮತ್ತು ಪೂ.ರೇ. 850 56' ಮೇಲೆ ಭಾಗಮತಿ ನದಿಯ ಪೂರ್ವದಲ್ಲಿ ಇದೆ.  ಇದೊಂದು ಪ್ರಮುಖ ರೈಲ್ವೆ ಮತ್ತು ರಸ್ತೆ ಸಂಧಿಸ್ಥಳ.  ಧಾನ್ಯ, ಮಾವು ಮತ್ತು ಮೀನು ವ್ಯಾಪಾರ ಕೇಂದ್ರ.  ಅಕ್ಕಿ, ಸೆಣಬು, ಸಕ್ಕರೆ, ಪಾದರಕ್ಷೆಯ ದಾರ, ತಯಾರಿಕೆಗಳ ಮುಖ್ಯ ಕೈಗಾರಿಕೆಗಳು.  ದರ್ಭಾಂಗಾದ ದಕ್ಷಿಣದ ಉಪನಗರವಾದ ಲಹೇರಿಯಾ ಸರಾಯ್‍ನಲ್ಲಿ ಜಿಲ್ಲಾ ಆಡಳಿತ ಕಚೇರಿಗಳಿವೆ.  ಇದು 16ನೆಯ ಶತಮಾನದಲ್ಲಿ ಸ್ಥಾಪಿತವಾದ ದರ್ಭಾಂಗಾ ಸಂಸ್ಥಾನದ ರಾಜಧಾನಿಯಾಗಿತ್ತು.  ಇಲ್ಲಿ ಆನಂದಭಾಗ್ ಅರಮನೆ ಇದೆ.  1864 ರಲ್ಲಿ ಇಲ್ಲೊಂದು ಪೌರಸಭೆ ಏರ್ಪಟ್ಟಿತ್ತು.  ಬಿಹಾರ್ ವಿಶ್ವವಿದ್ಯಾಲಯಕ್ಕೆ ಸೇರಿದ ಎರಡು ಕಾಲೇಜುಗಳಿವೆ.  ಇಲ್ಲಿ 1961 ರಲ್ಲಿ ಕಾಮೇಶ್ವರ ಸಿಂಗ್ ದರ್ಭಾಂಗಾ ಸಂಸ್ಕøತ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.  
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ